ಕೊಣ್ಣೂರು ಪಟ್ಟಣಕ್ಕೆ ನುಗ್ಗಿದ ನೀರು. ವಿಶೇಷ ಪೂಜೆ ಸಲ್ಲಿಸಿದ ಸುಮಂಗಲೆಯರು

ಗೋಕಾಕ : ಹಿಡಕಲ್ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರು ಘಟಪ್ರಭಾ ನದಿಗೆ ಹರಿದು ಬಿಟ್ಟಿದ್ದರಿಂದ ಕೊಣ್ಣೂರ ಪಟ್ಟಣಕ್ಕೆ ನೀರು   ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ಥಗೊಂಡು, ಹಲವಾರು ಕುಟುಂಬಗಳನ್ನು ಗಂಜಿ‌ಕೇಂದ್ರಗಳಿಗೆ ಸ್ಥಳಾಂತರಗೊಳಿಸಲಾಗಿದೆ.

ಕೊಣ್ಣೂರಿನ ಅಂಬೇಡ್ಕರ ನಗರ, ಕುಂಬಾರ ಗಲ್ಲಿಯ ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ, ಸುಮಾರು ಹದಿನೈದು ಮನೆಗಳು ನೇಲಸಮವಾಗಿವೆ. ಆದ್ದರಿಂದ ಜಾನುವಾರಗಳ ಸಮೇತ ಕುಟುಂಬಸ್ಥರನ್ನ ಗಂಜಿಕೆಂದ್ರಗಳಿಗೆ ಸ್ಥಳಾಂತರಿಸಿದೆ. ಕೊಣ್ಣೂರ, ದುಪದಾಳ  ಸೇತುವೆ  ಸಂಪೂರ್ಣ ಜಲಾವೃತಗೊಂಡಿದ್ದರಿಂದ ಸಂಚಾರ ಸ್ಥಗಿತಗೊಳಿಸಲಾಗಿದೆ.

ಅಂಬೇಡ್ಕರ ನಗರದ ನಿವಾಸಿಗಳು ಗಂಗಾಮಾತೆ ಮುನಿಸಿಕೊಂಡಿದ್ದಾಳೆಂದು ಪೂಜೆಗೆ ಮೊರೆ ಹೋಗಿದ್ದು, ಇಲ್ಲಿಯ ಸುಮಂಗಲೆಯರು ವಿಶೇಷ ಪೂಜೆ ಸಲ್ಲಿಸಿ ಯಾವುದೇ ಅನಾಹುತಗಳು ಆಗದಂತೆ ದೇವಿ ಕಾಪಾಡಲಿ ಎಂದು ಪ್ರಾರ್ಥಿಸಿದರು. ಗಂಗಾ ಮಾತೆ ಮುನಿಸಿಕೊಂಡಾಗ ಇಂತಹ ಘಟನೆಗಳು ಉಂಟಾಗುತ್ತವೆ, ದೇವಿಗೆ ಪೂಜೆ ಸಲ್ಲಿಸಿದರೆ ಅನಾಹುತಗಳು ತಪ್ಪುತ್ತವೆ ಎಂಬುದು ಇವರ ನಂಬಿಕೆಯಾಗಿದೆ.

ಇನ್ನು ಇಲ್ಲಿಯ ಯುವಕರು ಸ್ವಯಂ ಪ್ರೇರಿತವಾಗಿ ಸಂತ್ರಸ್ತರಿಗೆ ದುರ್ಗಾದೇವಿಯ ಸಮುದಾಯ ಭವನದಲ್ಲಿ ತಂಗಲು ವ್ಯವಸ್ತೆ ಕಲ್ಪಿಸಿ, ಸಂತ್ರಸ್ಥರಿಗೆ ನೆರವಾಗಿದ್ದಾರೆ.