ಕೊಡಗಿನಲ್ಲಿ ದಾಖಲೆ ಮಳೆ, ರೆಡ್ ಅಲರ್ಟ್ ಘೋಷಣೆ. ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ

ಮಡಿಕೇರಿ : ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಭಾಗಮಂಡಲದಲ್ಲಿ 292.40 ಮಿ.ಮೀ. ದಾಖಲೆ ಮಳೆಯಾಗಿದೆ. ಜಿಲ್ಲೆಯಲ್ಲಿ ಸರಾಸರಿ 145.58 ಮಿ.ಮೀ. ದಾಖಲೆ ಮಳೆಯಾಗಿದೆ.

ಇಂದು ಸಹ ಜಿಲ್ಲೆಯಾದ್ಯಂತ ಬಿಡುವು ನೀಡದೆ ಮಳೆ ಸುರಿಯುತ್ತಿದ್ದು, ಭಾಗಮಂಡಲ-ಮಡಿಕೇರಿ ಮತ್ತು ಭಾಗಮಂಡಲ-ಅಯ್ಯಂಗೇರಿ ರಸ್ತೆ ಭರ್ತಿಯಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಕರಡಿಗೋಡು ಗ್ರಾಮದಲ್ಲಿನ ಜನವಸತಿ ಪ್ರದೇಶಕ್ಕೆ ಮಳೆ ನೀರು ಹರಿದಿದೆ.

ಮಕ್ಕಂದೂರು ಗ್ರಾ.ಪಂ.ವ್ಯಾಪ್ತಿಯ ಎಮ್ಮೆತ್ತಾಳು ಸೇತುವೆ ಬಳಿ ಸಂಪರ್ಕ ರಸ್ತೆಯಲ್ಲಿ ನೀರಿನ ಹರಿವು ಭರ್ತಿಯಾಗಿದೆ. ಹೊದ್ದೂರು-ನಾಪೋಕ್ಲು, ಮೂರ್ನಾಡು-ಬಲಮುರಿ ಮುಖ್ಯ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಭ್ಯತ್‍ಮಂಗಲ ಗ್ರಾಮದ ಬಳಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಸಿದ್ದಾಪುರ ನೆಲ್ಯಹುದಿಕೇರಿ ಗ್ರಾಮದ  20 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕಾವೇರಿ ನದಿ ಮತ್ತು ಕೊಡಗಿನ ದಕ್ಷಿಣ ಭಾಗದ ಲಕ್ಷ್ಮಣ ತೀರ್ಥ ತುಂಬಿ ಹರಿಯುತ್ತಿದ್ದು, ಗದ್ದೆಗಳು ಜಲಾವೃತವಾಗಿವೆ. ಜಿಲ್ಲೆಯ ಎಲ್ಲಾ ಕಡೆಗಳಲ್ಲೂ ವ್ಯಾಪಕ ಮಳೆಯಾಗುತ್ತಿದ್ದು, ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.

ಪರಿಹಾರ ಕೇಂದ್ರ ಸ್ಥಾಪನೆ: ಜಿಲ್ಲೆಯಾದ್ಯಂತ ಹಲವೆಡೆ ಭೂಕುಸಿತ ಉಂಟಾಗಿದ್ದು, ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗಾಳಿ ಮಳೆಯಿಂದ ಭೂಕುಸಿತ ಉಂಟಾಗಿ ಮನೆಗಳಿಗೆ ಹಾನಿಯಾಗಿದೆ. ನದಿ ತೋಡುಗಳು ತುಂಬಿ ಹರಿಯುತ್ತಿದ್ದು, ಸಮೀಪದ ಮನೆಗಳು ಜಲಾವೃತಗೊಂಡಿವೆ. ಜಿಲ್ಲೆಯಲ್ಲಿ ಇನ್ನೂ ಎರಡು ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ ಅಪಾಯದ ಅಂಚಿನಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ.

ಪ್ರಕೃತಿ ವಿಕೋಪದಿಂದ ಸಂತ್ರಸ್ಥರಾದವರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಸಂತ್ರಸ್ಥರಿಗೆ ಮೂಲ ಸೌಕರ್ಯಗಳನ್ನು ಉತ್ತಮ ರೀತಿಯಲ್ಲಿ  ಒದಗಿಸುವ ಹಾಗೂ ನಿರ್ವಹಿಸುವ ನಿಟ್ಟಿನಲ್ಲಿ ಪುನರ್ವಸತಿ ಕೇಂದ್ರಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಸದ್ಯ ಕರಡಿಗೋಡು ಮತ್ತು ಐಕೊಳದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಉಳಿದಂತೆ ಅಗತ್ಯವಿರುವ ಕಡೆ ಪರಿಹಾರ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲಾಗಿದೆ.

ಮಳೆ ವಿವರ: ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 145.58 ಮಿ.ಮೀ. ಕಳೆದ ವರ್ಷ ಇದೇ ದಿನ 13.67 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1304.40 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2647.96 ಮಿ.ಮೀ ಮಳೆಯಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 188.35 ಮಿ.ಮೀ. ಕಳೆದ ವರ್ಷ ಇದೇ ದಿನ 11.40 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1744.56 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 3724.28 ಮಿ.ಮೀ. ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 142.50 ಮಿ.ಮೀ. ಕಳೆದ ವರ್ಷ ಇದೇ ದಿನ 9.63 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1355.06 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2107.24 ಮಿ.ಮೀ. ಮಳೆಯಾಗಿತ್ತು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 105.88 ಮಿ.ಮೀ. ಕಳೆದ ವರ್ಷ ಇದೇ ದಿನ 19.97 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 813.58 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 2112.36 ಮಿ.ಮೀ. ಮಳೆಯಾಗಿತ್ತು.

ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರ:-ಮಡಿಕೇರಿ ಕಸಬಾ 139.40, ನಾಪೋಕ್ಲು 197.20, ಸಂಪಾಜೆ 124.40, ಭಾಗಮಂಡಲ 292.40, ವಿರಾಜಪೇಟೆ ಕಸಬಾ 154, ಹುದಿಕೇರಿ 144.20, ಶ್ರೀಮಂಗಲ 180.60, ಪೊನ್ನಂಪೇಟೆ 205.20, ಅಮ್ಮತ್ತಿ 103, ಬಾಳೆಲೆ 68, ಸೋಮವಾರಪೇಟೆ ಕಸಬಾ 121.80, ಶನಿವಾರಸಂತೆ 104.40, ಶಾಂತಳ್ಳಿ 222.60, ಕೊಡ್ಲಿಪೇಟೆ 100.23, ಕುಶಾಲನಗರ 31, ಸುಂಟಿಕೊಪ್ಪ 55.30 ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2842.55 ಅಡಿಗಳು, ಕಳೆದ ವರ್ಷ ಇದೇ ದಿನ 2858.09 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 46.80 ಮಿ.ಮೀ., ಕಳೆದ ವರ್ಷ ಇದೇ ದಿನ 6.80 ಮಿ.ಮೀ. ಇಂದಿನ ನೀರಿನ ಒಳಹರಿವು 8926 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 5083 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು ನದಿಗೆ 30 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನದಿಗೆ 2867, ನಾಲೆಗೆ 1400 ಕ್ಯುಸೆಕ್.

ಕೊಡಗು ಜಿಲ್ಲೆ ಮಳೆ ಪ್ರವಾಹದಿಂದ ರೇಡ್ ಅಲರ್ಟ್ ಘೋಷಿಸಲಾಗಿದ್ದು ಸಾರ್ವಜನಿಕರು ಮುಂಜಾಗ್ರತಾ ಕ್ರಮ ವಹಿಸಬೇಕಿದ್ದು ಜಿಲ್ಲಾಡಳಿತ ಮನವಿ ಮಾಡಿ, ಎರಡು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ವರದಿ : ಮುಬಾರಕ್