ಮಾನವನ ರೋಗಗಳಿಗೆ ಮತ್ತು ಆರೋಗ್ಯ ರಕ್ಷಣೆಗೆ ಮಜ್ಜಿಗೆ ಎಷ್ಟು ರಕ್ಷಣೆ ಗೊತ್ತಾ ..!

ಊಟ ಬಲ್ಲವನಿಗೆ ರೋಗವಿಲ್ಲ’ ಎಂಬುದು ಒಂದು ಪ್ರಾಚೀನ ವೈದ್ಯಗಾದೆ. ಭಾರತೀಯ ಊಟದಲ್ಲಿ ಮಜ್ಜಿಗೆ ಕೊನೆಯ ಘಟ್ಟ. ತಿಂದದ್ದೆಲ್ಲವೂ ಜೀರ್ಣವಾಗಿ ಉದರಕ್ಕೆ ಹಿತವಾಗಿ, ಬಾಯಿಗೆ ಒಳಿತಾಗಿ, ದಂತಕ್ಷಯಕ್ಕೆ ಉತ್ತೇಜನ ಸಿಗದಂತೆ ಈ ಮಜ್ಜಿಗೆಯನ್ನು ಬಳಸುವ ರೀತಿಯಲ್ಲಿ ಎಚ್ಚರಿಕೆ ವಹಿಸಿದ್ದಾರೆ. ನಮ್ಮ ಪ್ರಾಚೀನರು.

ಮಜ್ಜಿಗೆ, ಇದರ ಬಗ್ಗೆ ತಿಳಿಯದವರಿಲ್ಲ. ಮಜ್ಜಿಗೆ ಆರೋಗ್ಯ ರಕ್ಷಿಸಲು ಮಹತ್ವದ ಪಾತ್ರ ವಹಿಸುತ್ತದೆಯಾದರೂ ಶುದ್ಧ ಮಜ್ಜಿಗೆಯಾಗಿ ಬಳಸುವ ವಿಧಾನದಲ್ಲಿ ಹೆಚ್ಚಿನವರು ಎಡವಿದ್ದಾರೆ.  ನಾಗರಿಕತೆ ಬೆಳೆದಂತೆಲ್ಲ ಬದುಕು ಸಂಕೀರ್ಣವಾಗಿ ಪ್ರತಿಯೊಂದಕ್ಕೂಅವಸರ’ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವ ನಾಗರಿಕನಿಗೆ ಮೊಸರು ಕಡೆದು ಬೆಣ್ಣೆ ತೆಗೆಯುವ, ಶುದ್ಧ ಮಜ್ಜಿಗೆ ಮಾಡುವ ವೇಳೆ ಇಲ್ಲ ! ಮೊಸರಿಗೆ ನೀರು ಬೆರೆಸಿ, ಕಲಸಿಬಿಟ್ಟರೆ ಮಜ್ಜಿಗೆ ಸಿದ್ಧ ಎನ್ನುವಂತಾಗಿದೆ.

ಅಶಾಸ್ತ್ರೀಯ ಮಜ್ಜಿಗೆಯ ಉಪಯೋಗದಿಂದಾಗಿ ಭೂಲೋಕದ ಅಮೃತ ಅನೇಕ ಕಾಯಿಲೆಗಳನ್ನು ನಿವಾರಿಸುವಲ್ಲಿ ಹಿಂದೆ ಬಿದ್ದಿದೆ.
ಆಯುರ್ವೇದ ವೈದ್ಯ ಶಾಸ್ತ್ರಗ್ರಂಥಗಳು-
ಸುರಾನಂ ಅಮೃತಂ ಪ್ರಧಾನಂ | 
ತಥಾ ನರಾಣಾಂ, ಭುವಿ ತಕ್ರಂ ಮಾಹುಃ ||
ಎಂದು ಇದರ ಅಮೃತಮಯ ಗುಣವನ್ನು ಹಾಡಿ, ಹೊಗಳಿವೆ.
ಪಂಚಾಮೃತಗಳಲ್ಲಿ ಮಜ್ಜಿಗೆಯ ಪೂರ್ವ ರೂಪಗಳಾದ ಹಾಲು, ಮೊಸರು, ಉತ್ತರ ರೂಪವಾದ ತುಪ್ಪವೂ ಸೇರಿಹೋಗಿದೆ. ಪಂಚಾಮೃತಗಳಲ್ಲಿ ಗುಪ್ತಗುಳದ ಮಜ್ಜಿಗೆ ಆರೋಗ್ಯವರ್ಧನೆಯ ನೆಲೆ ಎಂಬುದು ಆಯುರ್ವೇದ ಶಾಸ್ತ್ರಕಾರಕ ಮತ.

# ಬಲಕಾರಕ :
ಈ ಮಜ್ಜಿಗೆಯ ಹೆಗ್ಗಳಿಕೆಯಾದರೂ ಏನು? ಚರಕ ಸಂಹಿತೆ’ ಮಜ್ಜಿಗೆ ಕುರಿತು ಹೀಗೆ ಹೇಳುತ್ತದೆ. `ಮಾನವನ ರೋಗಗಳಿಗೆ ಕಾರಣವಾದ ವಾತ, ಪಿತ್ತ, ಕಫ ದೋಷಗಳನ್ನು ನಾಶಮಾಡಿ ಆರೋಗ್ಯ ರಕ್ಷಣೆ ಮಾಡುತ್ತದೆ. ಹಸಿವೆಯನ್ನು ಹೆಚ್ಚು ಮಾಡುತ್ತದೆ. ತಿಂದ ಆಹಾರ ಪಚನವಾಗುವಂತೆ ಮಾಡುತ್ತದೆ. ರಕ್ತ, ಮಾಂಸಗಳನ್ನು ವೃದ್ಧಿಗೊಳಿಸುತ್ತದೆ. ಹಾಗಾಗಿ ಬಲಕಾರಕ, ಮೂಲ್ಯವ್ಯಾಧಿ. ಸಂಗ್ರಹಿಣಿ ರೋಗಗಳಿಗೆ ಮಜ್ಜಿಗೆ ಒಂದು ದಿವ್ಯೌಷಧಿ’
`ಹುಳಿ, ಒಗರು, ಜೀರ್ಣಕ್ಕೆ ಸುಲಭ ಎಂದು ಮಜ್ಜಿಗೆಯ ತುಲನೆ ಮಾಡಿದ `ಅಷ್ಟಾಂಗ ಹೃದಯ’ ಬಾವು, ಉದರವ್ಯಾಧಿ, ಮೂತ್ರಘಾತ.. ಅರುಚಿ, ಪ್ಲೀಹ, ಗುಲ್ಯ, ಕೃತ್ರಿಮ ವಿಷ ಹಾಗೂ ಅಧಿಕ ತುಪ್ಪ ಸೇವನೆಯಿಂದುಂಟಾದ ದುಷ್ಪರಿಣಾಮಗಳನ್ನು ನಾಶ ಮಾಡುತ್ತದೆ’’ ಎಂದಿದೆ. `ಸುಶ್ರುತ ಸಂಹಿತೆ’ ಯಂತೂ ಮೇಲಿನ ಎಲ್ಲಾ ಗುಣಗಳನ್ನು ಹೇಳಿರುವುದರ ಜೊತೆಗೆ ಮಜ್ಜಿಗೆಯನ್ನು ಬೇರೆ ರೋಗಗಳಲ್ಲಿ ಸುಸ್ಕರಿಸಿ ಉಪಯೋಗಿಸುವ ವಿಧಾನವನ್ನು ಹೇಳಿದೆ. ವಾತರೋಗಗಳಲ್ಲಿ ಮಜ್ಜಿಗೆಗೆ ಸೈಂಧವ ಲವಣವನ್ನು ಬೆರಸಿಯೂ, ಪಿತ್ತ ರೋಗಗಳಲ್ಲಿ ಸಕ್ಕರೆಯನ್ನು ಬೆರೆಸಿಯೂ, ಕಫ ರೋಗಗಳಲ್ಲಿ ತ್ರಿಕಟು ಮತ್ತು ಕ್ಷಾರಗಳನ್ನು ಬೆರೆಸಿಯೂ ಉಪಯೋಗಿಸಬೇಕೆಂದು ಹೇಳಲಾಗಿದೆ.

# ಊಟದ ಸಿರಿ :
ತಿನ್ನುವ ಆಹಾರದಲ್ಲಿ ಖಾರ, ಸಿಹಿ, ಉಪ್ಪು, ಜಿಡ್ಡಿನ ಅಂಶಗಳಿರುವ ಕಾರಣ ಇವುಗಳೆಲ್ಲ ಸುಲಭವಾಗಿ ಜೀರ್ಣವಾಗಲೆಂಬ ಉದ್ದೇಶದಿಂದ ಊಟದ ಕೊನೆಯಲ್ಲಿ `ಮಜ್ಜಿಗೆ ಅನ್ನ’ದ ಸೂತ್ರವನ್ನು ಅಳವಡಿಸಲಾಗಿದೆ. ಇಲ್ಲವೆ ಊಟದ ಕೊನೆಯಲ್ಲಿ ಮಜ್ಜಿಗೆ ಅನ್ನದ ಸೂತ್ರವನ್ನು ಅಳವಡಿಸಲಾಗಿದೆ. ಇಲ್ಲವೆ ಊಟದ ಕೊನೆಯಲ್ಲಿ ಕುಡಿಯಲು ಹೇಳಲಾಗಿದೆ. ಈ ಮಜ್ಜಿಗೆ, ಆಹಾರದಲ್ಲಿ ಸೇರಿರಬಹುದಾದ ವಿಷದ ದುಷ್ಪರಿಣಾಮವನ್ನು ನಿವಾರಿಸಲು ಸಮರ್ಥವಾಗಿದೆ ಎಂದು ಆಯುರ್ವೇದ ವೈದ್ಯ ಪ್ರತಿಪಾದಿಸುತ್ತದೆ.  ಹೀಗಾಗಿ ದಕ್ಷಿಣ ಭಾರತೀಯರ ಊಟ ಊವ್ವೆ, ಸಿಹಿ, ತಂಬಳಿಯಿಂದ ಆರಂಭವಾಗಿ, ಮಜ್ಜಿಗೆ ಸೇವನೆಯೊಂದಿಗೆ ಮುಕ್ತಾಯವಾಗುತ್ತದೆ.

ಊಟದ ನಂತರ ಹಾಗೂ ದಿನದ ಬೇರೆ ಬೇರೆ ವೇಳೆಯಲ್ಲಿ ಧಾರಾಳವಾಗಿ ನೀರು ಮಜ್ಜಿಗೆ ಉಪಯೋಗಿಸುವುದು ಆರೋಗ್ಯಕ್ಕೆ ಒಳ್ಳೆಯದು. ಹಾಲಿನ ಬೆಲೆ ಹೆಚ್ಚಿದಂತೆಲ್ಲ ಅದರ ಬಳಕೆ ಕಮ್ಮಿಯಾಗುತ್ತ ಹೋಗುತ್ತದೆ. ಹಾಗಾಗಿ ಮಜ್ಜಿಗೆಯ ಶಾಸ್ತ್ರೀಯ ಬಳಕೆಯ ಕ್ರಮವೂ ತಪ್ಪುತ್ತಿದೆ. ಹೆಚ್ಚಿನ ಮನೆಗಳಲ್ಲಿ, ಅದರಲ್ಲೂ ಪಟ್ಟಣ ಪ್ರದೇಶಗಳಲ್ಲಿ ಮೊಸರನ್ನು ಮೇಲೆ, ಕೆಳಗೆ ಸುರಿದು ನೀರು ಹಾಕಿದರೆ ಮಜ್ಜಿಗೆ ಎಂದ ದ್ರವ ತಯಾರಾದಂತೆ. ಇಂಥ ಮಜ್ಜಿಗೆಯಿಂದ ಆರೋಗ್ಯಕ್ಕೆ ಲಾಭವಾಗುವುದು ಅಷ್ಟಕಷ್ಟೆ.

# ಮಜ್ಜಿಗೆಯನ್ನು ಹೀಗೆ ತಯಾರಿಸಿ.

Butter-Milk-01
ಹಸುವಿನ ಹಾಲಿನಿಂದ, ಶಾಸ್ತ್ರೋಕ್ತವಾಗಿ ತಯಾರಿಸಿದ ಮಜ್ಜಿಗೆ ಉತ್ತಮವಾದದ್ದು. ಸಣ್ಣ ಉರಿಯಲ್ಲಿ ಕಾಯಿಸಿದ ಹಾಲನ್ನು ಉಗುರು ಬೆಚ್ಚಗಿರುವಾಗ ಹೆಪ್ಪು (ಸ್ವಲ್ಪ ಹುಳಿಮಜ್ಜಿಗೆ) ಹಾಕಿ 6 ರಿಂದ 8 ಗಂಟೆಗಳ ಕಾಲ ಬಿಟ್ಟರೆ ಮೊಸರು ಸಿದ್ಧ. ಅದಕ್ಕೆ 1:4 ಪ್ರಮಾಣದಲ್ಲಿ ನೀರು ಬೆರಸಿ ಕಡೆಯಬೇಕು. ನಂತರ ಬಂದ ಬೆಣ್ಣೆಯನ್ನು ತೆಗೆದು ಅದಕ್ಕೆ ಮತ್ತೆ ಸಾಕಷ್ಟು ನೀರು ಬೆರೆಸಿ ಉಪಯೋಗಿಸುವ ಮಜ್ಜಿಗೆ ಅಮೃತ ಸಮಾನ.

# ಔಷಧ ರೂಪದಲ್ಲಿ :
ಇಂದಿನ ಕಲಬೆರಕೆ ಯುಗದಲ್ಲಿನಾವು ತಿನ್ನುವ ಆಹಾರ ಪದಾರ್ಥಗಳು ಅನೇಕ ವಿಧವಾದ ರಾಸಾಯನಿಕಗಳಿಂದ ತುಂಬಿ, ರಾಸಾಯನಿಕ ಗೊಬ್ಬರಗಳಿಂದ ಉತ್ಪತ್ತಿಯಾಗಿ, ಕ್ರಿಮನಾಶಕಗಳಿಂದ ಮೇಲು ಪ್ರಚಾರಗೊಂಡು ಆರೋಗ್ಯ ಕ್ಷೀಣಿಸಲು ಅರ್ಥಾತ್ ಜೀರ್ಣಾಂಗ ಸಂಬಂದೀ ರೋಗಗಳು ಹೆಚ್ಚಿಸಲು ಕಾರಣವಾಗಿದೆ. ಕೃತ್ರಿಮ ವಿಷಗಳಿಂದ ಉಂಟಾಗುವ ರೋಗಗಳನ್ನು ಮತ್ತು ಉಪದ್ರವಗಳನ್ನು ತಡೆಗಟ್ಟಲು ಮಜ್ಜಿಗೆ ಒಂದು ವರದಾನ.

ಜಿಡ್ಡು ಹೆಚ್ಚಾಗುತ್ತದೆ. ಪರಿಣಾಮವಾಗಿ ಬೊಜ್ಜು ಬೆಳೆಯುತ್ತದೆ. ರಕ್ತನಾಳಗಳಲ್ಲಿ ಕೊಬ್ಬಿನ ಅಂಶ ಶೇಖರವಾಗಿ ಹೃದ್ರೋಗ, ರಕ್ತದ ಒತ್ತಡ ಮೊದಲಾದ ಮಾರಕ ರೋಗಗಳು ದಾಳೀಯಿಡಲಾರಂಭಿಸುತ್ತವೆ. ಮಜ್ಜಿಗೆ ಸೇವನೆಯಿಂದ ಕೊಬ್ಬಿನ ಅಂಶವನ್ನು ಕಡಿಮೆ ಮಾಡಬಹುದು.
ಬೊಜ್ಜು ಇರುವವರು ಮಜ್ಜಿಗೆಗೆ 1:8ರ ಪ್ರಮಾಣದಲ್ಲಿ ನೀರು ಬೆರೆಸಿ, ಒಂದು ಚಮಚ ಬೆಳ್ಳುಳ್ಳಿ ರಸ, ಸೈಂಧವ ಲವಣ ರುಚಿಗೆ ತಕ್ಕಂತೆ ಸೇರಿಸಿ ಉಪಯೋಗಿಸಬಹುದು ಅಥವಾ ಒಂದು ದೊಡ್ಡ ಲೋಟ ನೀರು ಮಜ್ಜಿಗೆಗೆ ಕಾಲು ಚಮಚ ಯವಕ್ಷಾರ ಅಥವಾ ಕಾಲು ಚಮಚ ತ್ರಿಕಟು (ಹಿಪ್ಪಲಿ, ಶುಂಠಿ, ಮೆಣಸು.) ಚೂರ್ಣ, ಸೈಂಧವ ಲವಣ ಬೆರೆಸಿ ಉಪಯೋಗಿಸಿದರೆ ಉತ್ತಮ ಫಲ ನೀಡುತ್ತದೆ.

ಕೊಬ್ಬಿನ ಅಂಶ (ಕೊಲೆಸ್ಟ್ರಾಲ್) ನಿಯಂತ್ರಣಕ್ಕೆ ಮಜ್ಜಿಗೆ ತಯಾರಿಕೆ :
ಕಾಲು ಲೀಟರ್ ಹಾಲಿಗೆ 15-20 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಚೆನ್ನಾಗಿ ಕಾಯಿಸಬೇಕು. ಅದು ತಣ್ಣಗಾದ ಮೇಲೆ ಹೆಪ್ಪು ಹಾಕಿ ಮೊಸರು ಮಾಡಿಕೊಳ್ಳಬೇಕು. ಈ ಮೊಸರಿಗೆ ಸಮಪಾಲು ನೀರು ಸೇರಿಸಿ ಮಂಥಿನಿಂದ ಚೆನ್ನಾಗಿ ಕಡೆದು ಬರುವ ಬೆಣ್ಣೆಯನ್ನು ತೆಗೆದುಬಿಡಬೇಕು. ನಂತರ ಇದಕ್ಕೆ ಆರರಷ್ಟು ನೀರು ಸೇರಿಸಿ ನೀರು ಮಜ್ಜಿಗೆಯನ್ನು ಮಾಡಿಕೊಳ್ಳಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಸೈಂಧವ ಲವಣ ಸೇರಿಸಿ ಇಟ್ಟುಕೊಳ್ಳಬೇಕು. ಈ ಮಜ್ಜಿಗೆಯನ್ನು ಊಟದಲ್ಲಿ ಹಾಗೂ ಕುಡಿಯಲಿಕ್ಕೆ ದಿನಪೂರ್ತಿ ಉಪಯೋಗ ಮಾಡಬಹುದು. ಇದು ದೇಹದಲ್ಲಿ ಉಂಟಾಗುವ ಕೊಬ್ಬನ್ನು (ಕೊಲೆಸ್ಟ್ರಾಲ್) ನಿಯಂತ್ರಿಸಲು ಅಮೃತಸಮಾನವಾಗಿ ಕೆಲಸ ಮಾಡುತ್ತದೆ. ಇದಲ್ಲದೆ ಗ್ರಹಿಣಿ ರೋಗದಲ್ಲಿ ಅಂದರೆ ಅಮೀಬಿಯಾ ಸಿಸ್, ಕರುಳಿನ ಹುಣ್ಣು ಮುಂತಾದ ರೋಗಗಳಿಗೆ ಮಜ್ಜಿಗೆ ಸೇವನೆ ಉತ್ತಮ ಔಷಧ. ಮೂಲವ್ಯಾಧಿ, ಅತಿಸಾರ, ಅರುಚಿ, ಬಾಯಿ ಹುಣ್ಣು ಮುಂತಾದವುಗಳಲ್ಲಿ ಮಜ್ಜಿಗೆ ಧಾರಾಳವಾಗಿ ಉಪಯೋಗಿಸುವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಮಜ್ಜಿಗೆ ಇಲ್ಲದ ಊಟ
ಗೊಜ್ಜಗರಿಲ್ಲದ ಅರಮನೆ
ಯಜಮಾನರಿಲ್ಲದ ಮನೆ
ಈ ಮೂರು ಲಜ್ಜೆ ಕಣಯ್ಯ’  ಎಂದು ಕವಿ ಸರ್ವಜ್ಞ ಮಜ್ಜಿಗೆಯ ಹಿರಿಮೆಯನ್ನು ಹೊಗಳಿದ್ದಾನೆ.

# ಆಯುರ್ವೇದ ಶಾಸ್ತ್ರಗ್ರಂಥಗಳಲ್ಲಿ ಮಜ್ಜಿಗೆಯನ್ನು ಬಗೆಬಗೆಯಾಗಿ ಬಣ್ಣಿಸಿದೆ:
ಕೈಲಾಸದಲ್ಲಿ ಮಜ್ಜಿಗೆ ಇದ್ದಿದ್ದರೆ ಶಿವ ನೀಲಕಂಠನಾಗುತ್ತಿರಲಿಲ್ಲ. ವೈಕುಂಠದಲ್ಲಿ ಮಜ್ಜಿಗೆ ಇದ್ದಿದ್ದರೆ ದೇವನಿಗೆ ಶ್ಯಾಮಲವರ್ಣವಿರುತ್ತಿರಲಿಲ್ಲ. ದೇವಲೋಕದಲ್ಲಿ ಮಜ್ಜಿಗೆ ಇದ್ದಿದ್ದರೆ ಇಂದ್ರನು ಸೌಂದರ್ಯಹೀನ (ಕುರೂಪಿ) ನಾಗುತ್ತಿರಲಿಲ್ಲ. ದ್ವಿಜಪತಿಯಾದ ಚಂದ್ರನಿಗೆ ಕ್ಷಯರೋಗ ಪ್ರಾಪ್ತವಾಗುತ್ತಿರಲಿಲ್ಲ. ಗಣೇಶನಿಗೆ ಹೊಟ್ಟೆ ಅಷ್ಟೊಂದು ದೊಡ್ಡದೂ ಆಗಿರುತ್ತಿರಲಿಲ್ಲ. ಕುಬೇರನಿಗೆ ಕುಷ್ಠರೋಗವೂ, ಅಗ್ನಿದೇವನಿಗೆ ದಾಹವೂ ಇರುತ್ತಿರಲಿಲ್ಲ’ ಎಂದು ಶ್ಲೋಕವೊಂದರಲ್ಲಿ ಮಜ್ಜಿಗೆಯ ಮಹತ್ತನ್ನು ಸಾರಲಾಗಿದೆ.  ಮಜ್ಜಿಗೆಯ ವಿವರ್ಣ, ವಿಷ, ಕುರೂಪಿ, ಕ್ಷಯ, ಉದರರೋಗ, ಕುಷ್ಠರೋಗ ಮತ್ತು ಹೊಟ್ಟೆಯಲ್ಲಿ ಉರಿ ಮುಂತಾದ ಕಾಯಿಲೆಗಳಿಗೆ ಉತ್ತಮ ಔಷಧಿಯಾಗಿ ಬಳಸಲಾಗುವುದರಿಂದ ಇದು ಆರೋಗ್ಯ ವೃದ್ಧಿಗೆ ಉತ್ತಮ ಔಷಧಿಯಾಗಿ ಬಳಸಲಾಗುವುದರಿಂದ ಇದು ಆರೋಗ್ಯ ವೃದ್ಧಿಗೆ ಸಂಜೀವಿನಿ.
ಆದ್ದರಿಂದ ಎಳೆಯರಿಂದ ವೃದ್ಧರವರೆಗೆ ಎಲ್ಲರಿಗೂ ಮಜ್ಜಿಗೆ ಉಪಯೋಗಿಸಲು ಯೋಗ್ಯವಾಗಿದ್ದು, ದಿನನಿತ್ಯದ ಆಹಾರದಲ್ಲಿ, ಬಾಯಾರಿಕೆಯ ನಿವಾರಣಾ ಪೇಯವಾಗಿ ಬಳಸುತ್ತಾ ಬಂದರೆ ಆರೋಗ್ಯ ಆಯಸ್ಸು ಹೆಚ್ಚುವವು.