ಸ್ವಿಸ್ ಬ್ಯಾಂಕ್​ನಲ್ಲಿ ಭಾರತೀಯರ ಹಣ ಶೇ.50ರಷ್ಟು ಹೆಚ್ಚಳ… ಮೋದಿ ಸರ್ಕಾರಕ್ಕೆ ಮುಖಭಂಗ?

ನವದೆಹಲಿ: ವಿದೇಶದಲ್ಲಿನ ಕಪ್ಪು ಹಣವನ್ನು ವಾಪಸ್ ತರುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾಗುವಂತ ವರದಿಯೊಂದು ಹೊರ ಬಿದ್ದಿದೆ. ನೋಟು ಅಮಾನ್ಯೀಕರಣದ ಮೂಲಕ ಕಪ್ಪು ಕುಳಗಳಿಗೆ ಬಿಸಿ ಮುಟ್ಟಿಸಿದ್ದೇವೆ ಎನ್ನುತ್ತಿದ್ದ ಕೇಸರಿ ಪಾಳಯಕ್ಕೆ ಈ ವರದಿಯಿಂದ ಬಿಸಿ ತಟ್ಟಿದೆ.

ಸ್ವಿಸ್ ಬ್ಯಾಂಕ್​ನಲ್ಲಿ ಭಾರತೀಯರ ಹಣ ಶೇ.50ರಷ್ಟು ಹೆಚ್ಚಳವಾಗಿದೆ. 2017ರಲ್ಲಿ ಸ್ವಿಸ್ ಬ್ಯಾಂಕ್​ನಲ್ಲಿರುವ ಭಾರತೀಯರ ಹಣ ಶೇ.50ರಷ್ಟು ಅಂದರೆ 7 ಸಾವಿರ ಕೋಟಿಯಷ್ಟು ಹೆಚ್ಚಳವಾಗಿದೆ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ.

2017ರಲ್ಲಿ ಸ್ವಿಸ್ ಬ್ಯಾಂಕ್​ನಲ್ಲಿನ ವಿಶ್ವದ ಗ್ರಾಹಕರ ಹಣದಲ್ಲಿ ಶೇ.3ರಷ್ಟು ಅಂದರೆ 100 ಲಕ್ಷ ಕೋಟಿ ರೂ. ಹೆಚ್ಚಳವಾಗಿದೆ. ಇದರಲ್ಲಿ ಭಾರತೀಯರ ಹಣ ಶೇ.50ರಷ್ಟು ಹೆಚ್ಚವಾಗಿದೆ ಎಂದು ಸ್ವಿಸ್ ತಿಳಿಸಿದೆ. ಸ್ವಿಸ್ ಬ್ಯಾಂಕ್ ನಲ್ಲಿರುವ ಭಾರತೀಯ ಕಪ್ಪು ಕುಳಗಳ ಹಣವನ್ನು ವಾಪಸ್ ತರುವ ಕೇಂದ್ರ ಸರ್ಕಾರದ ಘೋಷಣೆ ಹೊರತಾಗಿಯೂ ಶೇ.50ರಷ್ಟು ಹೆಚ್ಚಳವಾಗಿರುವುದು ಅಚ್ಚರಿ ಮೂಡಿಸಿದೆ.

2016ರಲ್ಲಿ ಸ್ವಿಸ್ ಬ್ಯಾಂಕ್​ನಲ್ಲಿರುವ ಭಾರತೀಯರ ಹಣ ಶೇ.45ರಷ್ಟು ಅಂದರೆ 4,500 ಕೋಟಿ ರೂ. ಕಡಿಮೆಯಾಗಿತ್ತು. ಆದರೆ 2017ನೇ ಸಾಲಿನಲ್ಲಿ ಭಾರತೀಯರ ಹಣ 999 ಮಿಲಿಯನ್ ಹೆಚ್ಚಳವಾಗಿದೆ ಎಂದು ಎಸ್​ಎನ್​ಬಿ ಅಂಕಿಅಂಶಗಳು ಹೇಳುತ್ತಿವೆ. ಕಳೆದ ಒಂದು ದಶಕದಲ್ಲಿ ಸ್ವಿಸ್ ಬ್ಯಾಂಕ್​ನಲ್ಲಿ ಭಾರತೀಯರ ಹಣ ಹೆಚ್ಚಳವಾಗುತ್ತಿರುವುದು ಇದು ಮೂರನೇ ಬಾರಿ. ಈ ಹಿಂದೆ 2011ರಲ್ಲಿ ಶೇ.12ರಷ್ಟು, 2013ರಲ್ಲಿ ಶೇ.43ರಷ್ಟು ಹೆಚ್ಚಳವಾಗಿತ್ತು. 2004ರಲ್ಲಿ ಶೇ. 56ರಷ್ಟು ಹೆಚ್ಚಳವಾಗಿತ್ತು.

ಈಗ ಕಪ್ಪು ಹಣ ವಾಪಸಾತಿಯ ಭಯವಿಲ್ಲದೆ ಭಾರತೀಯರು ಸ್ವಿಸ್​ನಲ್ಲಿ ಹಣ ಇಡುತ್ತಿರುವುದು ಈ ವರದಿಯಿಂದ ಬಯಲಾಗಿದೆ.