ರಸ್ತೆ ಬಳಿ ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಆರೋಗ್ಯ ಸಚಿವ ಶ್ರೀ ಬಿ.ಶ್ರೀರಾಮುಲು

ಚಾಮರಾಜನಗರ : ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದ ಆರೋಗ್ಯ ಸಚಿವರಾದ ಬಿ.ಶ್ರೀರಾಮುಲು ಅವರು ಬುಧವಾರ ತಮ್ಮ ವಾಹನದಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ರಸ್ತೆ ಬದಿಯ ಮನೆಯೊಂದರ ಬಳಿ ಅನಾರೋಗ್ಯದಿಂದ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಸಚಿವರು ಬೆಳಗ್ಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ವಾಹನದಲ್ಲಿ ಹೋಗುತ್ತಿರುವಾಗ ರಸ್ತೆ ಬದಿ ಜನ ಸೇರಿದ್ದನ್ನು ಗಮನಿಸಿ ವಾಹನ ನಿಲ್ಲಿಸುವಂತೆ ಚಾಲಕನಿಗೆ ಹೇಳಿದರು. ವಾಹನದಿಂದ ಇಳಿದು ಗಮನಿಸಿದಾಗ ಅಲ್ಲಿ ಮಹಿಳೆಯೊಬ್ಬರು ನೆಲದಲ್ಲಿ ಬಿದ್ದಿದ್ದರು. ಅವರ ಅಕ್ಕ ಪಕ್ಕದಲ್ಲಿ ಕೆಲವರು ಮಹಿಳೆಯ ರಕ್ಷಣೆಗಾಗಿ ಕೂಗಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಸಚಿವರು ಕೂಡಲೇ ಜತೆಗಿದ್ದವರಿಗೆ ಆ ಮಹಿಳೆಯನ್ನು ಎತ್ತಿಕೊಂಡು ತಮ್ಮ ವಾಹನದಲ್ಲಿ ಕುಳ್ಳಿರಿಸುವಂತೆ ಸೂಚಿಸಿದರು. ಬಳಿಕ ಆಕೆಯನ್ನು ಅದೇ ವಾಹನದಲ್ಲಿ ಮಲೆ ಮಹದೇಶ್ವರ ಬೆಟ್ಟದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದರು.

ಅದರಂತೆ ಸಚಿವರೊಂದಿಗೆ ಇದ್ದ ಕೆಲವು ಸಿಬ್ಬಂದಿ ಮಹಿಳೆಯನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದರಿಂದ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ದೇವರ ದರ್ಶನ ಮಾಡಿದ ಬಳಿಕ ಸಚಿವ ಶ್ರೀ ಬಿ.ಶ್ರೀರಾಮುಲು ಅವರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಆರೋಗ್ಯ ವಿಚಾರಿಸಿದರು. ಅಲ್ಲದೆ, ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಔಷದ ನೀಡುವಂತೆ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಸೂಚಿಸಿದರು. ಸಚಿವರ ಈ ಕಾರ್ಯಕ್ಕಾಗಿ ಮಹಿಳೆಯ ಬಂಧುಗಳು ಮತ್ತು ಊರಿನವರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 

ವರದಿಗಾರ  : ಗುರುಪಾಗೌಡ ಕೊಪಳ