ಬಿಜೆಪಿಗೆ ನೋವಾದರೆ ನಮ್ಮ ತಾಯಿಗೆ ನೋವಾದಂತೆ: ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ: ವಿಜಯಪುರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಎರಡೂ ರಾಜ್ಯಗಳ ಚುನಾವಣೆ ಬಿಜೆಪಿಗೆ ಪಾಠವಾಗಿದೆ. ಸ್ಥಳೀಯ ನಾಯಕರನ್ನು ಹೈಕಮಾಂಡ್ ಇನ್ನು ಮುಂದೆ ಆದ್ಯತೆ ನೀಡಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಅಲ್ಲದೇ ಆಯಾ ರಾಜ್ಯಗಳಲ್ಲಿ ಅಲ್ಲಿಯ ನಾಯಕರಿಗೆ ಗೌರವ ನೀಡಲೇಬೇಕು. 30 ಸಾವಿರ ಮತಗಳಿಂದ ಸೋತವರು ಮಹಾರಾಷ್ಟ್ರದ ಸ್ಟಾರ್ ಪ್ರಚಾರಕರಾಗಿದ್ದರು. ಅವರು ಹೋದಲ್ಲಿ ಬಿಜೆಪಿ ಸೋತು ಹೋಗಿದೆ. ಬಿಜೆಪಿಗೆ ನೋವಾದರೆ ನಮ್ಮ ತಾಯಿಗೆ ನೋವಾದಂತೆ. ಈ ಹಿನ್ನೆಲೆ ಪಕ್ಷಕ್ಕೆ ಅನ್ಯಾಯವಾದಾಗ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಅವರು ಪ್ರತಿಪಕ್ಷದ ನಾಯಕ. ಹೋರಾಟ ಮಾಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ. ಸಿದ್ಧರಾಮಯ್ಯ ಪಾದಯಾತ್ರೆ ಬಳಿಕ ನಮಗೆ ಅವಕಾಶ ನೀಡಿದರೆ ನಾನು ಹೋಗಿ ರಾಜ್ಯ ಸರಕಾರದ ಸಾಧನೆಗಳನ್ನು ಪ್ರಚಾರ ಮಾಡುತ್ತೇನೆ. ಇಲ್ಲದಿದ್ದರೆ ಮೂರು ಜನ ಡಿಸಿಎಂ ಹೋಗಿ ರಾಜ್ಯ ಸರಕಾರದ ಸಾಧನೆಗಳನ್ನು ಪ್ರಚಾರ ಮಾಡಲಿ. 17 ಜನ ಶಾಸಕರು ರಾಜೀನಾಮೆ ನೀಡಿದ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಅನರ್ಹ ಶಾಸಕರು ಬಿಜೆಪಿಗೆ ಬಂದರೆ ಅವರಿಗೆ ಟಿಕೇಟ್ ನೀಡಲೇಬೇಕು ಎಂದಿದ್ದಾರೆ.