ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲು

ಬಿಗ್ ಬಿ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆಯೇ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಲಿವರ್ ಸಮಸ್ಯೆ ಅವರನ್ನು ಕಾಡುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿವೆ ಮೂಲಗಳು. ಆದರೆ ಇದು ರೆಗ್ಯುಲರ್ ಚೆಕಪ್ ಅಷ್ಟೇ ಎಂದಿವೆ ಆಸ್ಪತ್ರೆ ಮೂಲಗಳು.

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮುಂಬಯಿನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದ ಅಮಿತಾಭ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿವೆ ಮೂಲಗಳು. ಕಳೆದ ಮೂರು ದಿನಗಳಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಮಂಗಳವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ಅಮಿತಾಭ್‌ರನ್ನು ಕುಟುಂಬಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಐಸಿಯು ರೀತಿಯ ಕೊಠಡಿಯಲ್ಲಿ ಇರಿಸಲಾಗಿದ್ದು ನಿತ್ಯ ಅವರ ಮೇಲೆ ನಿಗಾ ಇಡಲಾಗಿದೆ. ಕುಟುಂಬಿಕರು ಬಂದು ಹೋಗುತ್ತಿದ್ದಾರೆ.

ಅಮಿತಾಭ್ ಫುಲ್ ಬಾಡಿ ಚೆಕಪ್‌ಗಾಗಿ ಆಸ್ಪತ್ರೆಗೆ ಬಂದಿದ್ದಾರೆಂದು, ಇದೊಂದು ರೆಗ್ಯುಲರ್ ಚೆಕಪ್ ಅಷ್ಟೇ. ಅವರು ಆರೋಗ್ಯವಾಗಿಯೇ ಇದ್ದಾರೆಂದು ನಾನಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಅಮಿತಾಭ್ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಆತಂಕ ಅಗತ್ಯ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ತಾನು ಲಿವರ್ ಸಿರೋಸಿಸ್‌ನಿಂದ ಬಳಲುತ್ತಿದ್ದು ಶೇ.75ರಷ್ಟು ಲಿವರ್ ಹಾಳಾಗಿದೆ. ಉಳಿದ ಶೇ.25ರಷ್ಟು ಲಿವರ್‌ನೊಂದಿಗೆ ಮಾತ್ರ ಬದುಕುತ್ತಿದ್ದೇನೆ ಎಂದು ಈ ಹಿಂದೊಮ್ಮೆ ಸ್ವತಃ ಅಮಿತಾಭ್ ಹೇಳಿದ್ದರು.

ಅಷ್ಟೇ ಅಲ್ಲದೆ ಈ ಹಿಂದೆ ಕ್ಷಯ, ಹೆಪಟೈಟಿಸ್ ಬಿ ಯಂತಹ ಖಾಯಿಲೆಗಳ ಜತೆಗೂ ಹೋರಾಡಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ತನಗೆ ಕ್ಷಯ ಇದೆ ಎಂದು 8 ವರ್ಷಗಳಷ್ಟು ತಡವಾಗಿ ತಿಳಿಯಿತು ಎಂದು ಹೇಳಿದ್ದರು.