ದುಡ್ಡು ಮಾಡೋದೆ ರಮೇಶ್ ಜಾರಕಿಹೊಳಿ ಕೆಲಸ: ಸತೀಶ್ ಜಾರಕಿಹೊಳಿ

ಬೆಂಗಳೂರು: ದುಡ್ಡು ಮಾಡುವುದೆ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕೆಲಸ ಎಂದು ಸಹೋದರ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಮಾಜಿ ಸಚಿವರು, ಸಾಲ ತೀರಿಸಬೇಕು, ದುಡ್ಡು ಮಾಡುವುದಕ್ಕೆ ಮೂರ್ನಾಲ್ಕು ವರ್ಷ ಬೇಕಾಗುತ್ತದೆ. ಹೀಗಾಗಿ ಬಿಜೆಪಿ ಸೇರಬೇಕಿದೆ ಎಂದು ರಮೇಶ್ ಜಾರಕಿಹೊಳಿ ಕಳೆದ ವರ್ಷವೇ ಹೇಳಿದ್ದರು. ದುಡ್ಡು ಮಾಡುವುದೇ ಅವರ ಕೆಲಸ. ಸೇವೆ ಮಾಡಲು ಬೇರೆಯವರು ರಾಜಕಾರಣ ಮಾಡಿದ್ರೇ, ರಮೇಶ್ ಜಾರಕಿಹೊಳಿ ಮತ್ತು ಅಳಿಯ ಅಂಬಿರಾವ್ ಪಾಟೀಲ್ ದುಡ್ಡು ಮಾಡುವುದಕ್ಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗೋಕಾಕ್‍ನ ವ್ಯವಸ್ಥೆ ಬದಲಾವಣೆ ಆಗಬೇಕೆಂದರೆ ಶಾಸಕರು ಬದಲಾಗಬೇಕು. ಆಗ ಅಂಬಿರಾವ್ ಪಾಟೀಲ್ ಕೈಯಿಂದ ಅಧಿಕಾರ ತಪ್ಪುತ್ತದೆ. ರಮೇಶ್ ಜಾರಕಿಹೊಳಿ ಅಧಿಕಾರದಲ್ಲಿ ಇರುವವರೆಗೂ ಅಂಬಿರಾವ್ ಕೈಯಲ್ಲಿ ಅಧಿಕಾರ ಇರುತ್ತದೆ. ದುಡ್ಡು ಮಾಡಿಕೊಂಡು ಸಾಲ ತೀರಿಸಿ ಮತ್ತೆ ಕಾಂಗ್ರೆಸ್‍ಗೆ ಬರುತ್ತೇನೆ ಅಂತ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಹೀಗಾಗಿ ಈಗ ರಮೇಶ್ ಕಾಂಗ್ರೆಸ್‍ಗೆ ಬರುವುದಿಲ್ಲ, ಮುಂದೆ ಬರಬಹುದು ಎಂದು ಲೇವಡಿ ಮಾಡಿದರು.

ಜಾತ್ರೆಯಲ್ಲಿ ಕೋಣ ಕಡಿಯಲು ಐದು ದಿನ ಪೂರ್ವದಲ್ಲಿ ಸುಣ್ಣದ ನೀರು ಕುಡಿಸುತ್ತಾರೆ. ಆ ರೀತಿ ತಪ್ಪಿ ರಮೇಶ್ ಜಾರಕಿಹೊಳಿ ಸುಣ್ಣದ ನೀರು ಕುಡಿದಿದ್ದಾರೆ. ಪಕ್ಷದಲ್ಲಿ ಗಲಿಬಿಲಿ ಮಾಡಿ ಸಿಕ್ಕಿಹಾಕಿಕೊಂಡು ಕುಳಿತಿದ್ದಾರೆ. ಅನರ್ಹ ಶಾಸಕರನ್ನು ಸೋಲಿಸಲು ಮತದಾರರಿಗೆ ಅವಕಾಶವಿದೆ. ಉಪಚುನಾವಣೆ ನಡೆದರೂ ಸರಿ, ಮುಖ್ಯ ಚುನಾವಣೆಯಾದರೂ ಸರಿ ನಾವು ಎಲ್ಲವನ್ನೂ ಎದುರಿಸಲು ಸಿದ್ಧರಿದ್ದೇವೆ ಎಂದು ಗುಡುಗಿದರು.

ರಾಜಕೀಯವಾಗಿ ನಮಗೂ ರಮೇಶ್ ಜಾರಕಿಹೊಳಿ ಕುಟುಂಬಕ್ಕೂ ಸಂಬಂಧವಿಲ್ಲ. ಅವರು ಪಾಟೀಲ್ ಸಾಮ್ರಾಜ್ಯಕ್ಕೆ ಸೇರಿದ್ದಾರೆ. ರಮೇಶ್ ಜಾರಕಿಹೊಳಿ ಗೋಕಾಕ್‍ನಲ್ಲಿ ಅಂಬಿರಾವ್ ಪಾಟೀಲ್ ಮಾತು ಕೇಳುತ್ತಾರೆ. ಹೀಗಾಗಿ ಅನರ್ಹ ಶಾಸಕರದ್ದು ಪಾಟೀಲ್ ಸಾಮ್ರಾಜ್ಯ ಎಂದು ವ್ಯಂಗ್ಯಾವಡಿದರು.

ರಮೇಶ್ ಜಾರಕಿಹೊಳಿ ಪುತ್ರ ಸಂತೋಷ್ ತನ್ನ ಚಿಕ್ಕಪ್ಪ, ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಪರವಾಗಿ ಪ್ರಚಾರಕ್ಕೆ ಬರುವುದನ್ನು ಕಾದುನೋಡಬೇಕಿದೆ. ಸಂತೋಷ್ ಮತ್ತು ಲಖನ್ ಜಾರಕಿಹೊಳಿ ನಡುವೆ ಒಳ್ಳೆಯ ಸಂಬಂಧವಿದೆ ಎಂದು ಹೇಳಿದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮೇಲೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ದೊಡ್ಡ ಜವಾಬ್ದಾರಿ ಇದೆ. ಮುಖ್ಯ ಚುನಾವಣೆ ಬಳಿಕ ಯಾರು ಸಿಎಂ ಆಗಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅನರ್ಹ ಶಾಸಕರಿಗೆ ಕಾಂಗ್ರೆಸ್‍ನಲ್ಲಿ ಅವಕಾಶ ಇಲ್ಲ ಎಂದು ವಿಪಕ್ಷ ನಾಯಕರು ಅಧಿವೇಶನದಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದರು.

ರಾಜ್ಯದಿಂದ ಮಹಾರಾಷ್ಟ್ರಕ್ಕೆ ನೀರು ಹರಿಸುತ್ತೇನೆ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಚುನಾವಣೆಗೆ ಅಷ್ಟೇ ಹೇಳಿಕೆ ಕೊಟ್ಟು, ನೀರು ಕೊಡಲಿಕ್ಕೆ ಆಗುವುದಿಲ್ಲ. ಸಿಎಂ ಮೊದಲು ಮಹದಾಯಿಂದ ನೀರು ಹರಿಸಲಿ. ಆ ನಂತರ ಮಹಾರಾಷ್ಟ್ರಕ್ಕೆ ನೀರು ಬಿಡುವ ಕುರಿತು ವಿಚಾರ ಮಾಡಲಿ. ಬೇಸಿಗೆಯಲ್ಲಿ ನೀರು ಬಿಡಿ ಅಂತ ಯಾವುದೇ ನಾಯಕು ಮಹಾರಾಷ್ಟ್ರದ ಜತೆಗೆ ಮಾತನಾಡಲಿಲ್ಲ. ಈಗ ಅಲ್ಲಿಗೆ ಹೋಗಿ ನೀರು ಬಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ರಾಜಕೀಯ ಅಷ್ಟೇ ಎಂದು ತಿರುಗೇಟು ನೀಡಿದರು.

ಬಿಜೆಪಿಯವರು ಭರವಸೆ ಕೊಡುತ್ತಾರೆಯೇ ಹೊರತು ಅದನ್ನು ಈಡೇರಿಸುವುದಿಲ್ಲ. ಯಾರು ಹಿಡಿತದಲ್ಲಿ ಯಾರು ಇದ್ದಾರೆ ಎಂಬುದು ಅವರ ಪಕ್ಷದವರೇ ಹೇಳಬೇಕು. ಬಿಜೆಪಿಯಲ್ಲಿ ಆಂತರಿಕವಾಗಿ ಗದ್ದಲ ಇದೆ. ಡಿಸೆಂಬರ್ ನಲ್ಲಿ ಸರ್ಕಾರ ಬೀದ್ದರೆ ನೋಡೋಣ. ಬಿಜೆಪಿಯವರು ಹೆಚ್ಚು ಆಡಳಿತ ಮಾಡಿದರೆ ನಮಗೆ ಅನುಕೂಲ ಎಂದು ಕುಟುಕಿದರು.