ಒಂದು ಗ್ಲಾಸ್ ಬಿಯರ್ ಗೆ 50 ಲಕ್ಷ ಕೊಟ್ಟ ಭೂಪ !

ಮ್ಯಾಂಚಿಸ್ಟರ್:ವಿಶ್ವದ ಎಂತಹ ಪ್ರತಿಷ್ಠಿತ ಹೋಟೆಲ್, ರಸ್ಟೋರೆಟ್ ಗಳಲ್ಲೂ ಒಂದು ಗ್ಲಾಸ್ ಬಿಯರ್ ಬೆಲೆ ಲಕ್ಷ ದಾಟಲಾರದು. ಆದರೆ ಇಲ್ಲೊಬ್ಬ ಭೂಪ 50 ಲಕ್ಷ ರೂ.ಪಾವತಿಸಿದ್ದಾನೆ.

ಈ ಘಟನೆ ನಡೆದಿದ್ದು ಇಂಗ್ಲೆಂಡಿನ ಮ್ಯಾಂಚಿಸ್ಟರ್ ನ ಹೋಟೆಲ್ ಒಂದರಲ್ಲಿ. ಆಸ್ಟ್ರೇಲಿಯಾದ ಕ್ರೀಡಾ ಪತ್ರಿಕೆಯೊಂದರ ಹಿರಿಯ ವರದಿಗಾರನಾದ ಪೀಟರ್ ಲಾಲರ್ ಎಂಬಾತನೆ ಯಡವಟ್ಟು ಮಾಡಿಕೊಂಡ ಆಸಾಮಿ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪಂದ್ಯಗಳ ಆ್ಯಶಸ್ ಸರಣಿಯನ್ನು ವರದಿ ಮಾಡಲು ತನ್ನ ಸ್ನೇಹಿತರೊಂದಿಗೆ ಮ್ಯಾಂಚಿಸ್ಟರ್ ಗೆ ಆಗಮಿಸಿದ್ದ.

ಮ್ಯಾಂಚಿಸ್ಟರ್ ಸಮೀಪದ ಮಾಲ್ ಮೈಸನ್ ಹೋಟೆಲ್ ನಲ್ಲಿ ವರದಿಗಾರ ಸ್ನೇಹಿತರೊಂದಿಗೆ ತಂಗಿದ್ದ. ಪಂದ್ಯ ಮುಗಿದ ಮೇಲೆ ರೂಮಿಗೆ ತೆರಳುವಾಗ ಬಿಯರ್ ಕುಡಿಯಲು ಮನಸ್ಸಾಗಿದೆ. ಮದ್ಯದ ಕೌಂಟರಿಗೆ ಹೋಗಿ ಡ್ಯೂಚರ್ಸ್ ಐಪಿಎ ಬ್ರಾಂಡಿನ ಒಂದು ಗ್ಲಾಸ್ ಬಿಯರ್ ಹೀರಿದ್ದಾನೆ. ಕುಡಿಯುವಾಗ ಟೇಬಲ್ ಬಳಿ ತನ್ನ ಕನ್ನಡಕವನ್ನು ಮರೆತ್ತಿದ್ದಾನೆ.

ಕೌಂಟರ್ ಬಳಿ ಹೋಗಿ ಬಿಲ್ ಪಾವತಿಸಲು ಹೋಗಿದ್ದಾನೆ. ಕನ್ನಡಕವಿರದ ಕಾರಣ ನಮೂದಾಗಿರುವ ಸಂಖ್ಯೆಗಳು ಕಾಣಿಸಲಿಲ್ಲ. ಜೊತೆಗೆ ಬಿಲ್ ಪಾವತಿಸುವ ಯಂತ್ರವೂ ಕೆಟ್ಟು ಹೋಗಿತ್ತು. ಕ್ಯಾಷಿಯರ್ ಬಿಲ್ ತೋರಿಸಿದಾಗ ಯಂತ್ರದಲ್ಲಿ 55 ಸಾವಿರ ಪೌಂಡ್(ಭಾರತೀಯ ರೂಗಳಲ್ಲಿ 50 ಲಕ್ಷ ರೂ.) ನಮೂದಾಗಿತ್ತು. ಅಷ್ಟು ದೊಡ್ಡ ಮೊತ್ತವಿರುವುದನ್ನು ಕ್ಯಾಷಿಯರ್ ಕೂಡ ಗಮನಿಸಲಿಲ್ಲ. ತನ್ನ ಬಳಿಯಿದ್ದ ಡೆಬಿಟ್ ಕಾರ್ಡಿನಿಂದ ಸ್ವೈಪ್ ಮಾಡಿದ್ದಾನೆ. ಕಾರ್ಡ್ ಉಜ್ಜಿದ ನಂತರ ಅಕೌಂಟಿನಿಂದ 55 ಸಾವಿರ ಪೌಂಡ್ ಹಣ ಕಡಿತಗೊಂಡಿದೆ.

ರೂಮಿಗೆ ಹೋದ ತಕ್ಷಣ ಪತ್ನಿಯಿಂದ ಕರೆ ಬರುತ್ತದೆ. ನಿಮ್ಮ ಅಕೌಂಟಿನಿಂದ 70 ಲಕ್ಷ ರೂ. ಡ್ರಾ ಆಗಿರುವ ಬಗ್ಗೆ ಮಾಹಿತಿ ನೀಡುತ್ತಾಳೆ. ಆಕೆಯ ಮಾತನ್ನು ಕೇಳಿ ದಿಗ್ಭ್ರಾಂತನಾಗಿ ಕ್ಯಾಷಿಯರ್ ಬಳಿ ತೆರಳಿ ತಾನೆಷ್ಟು ಪಾವತಿಸಿದ್ದೇನೆ ಎಂದು ವಿಚಾರಿಸಿದಾಗ ನೀವು 55 ಸಾವಿರ ಪೌಂಡ್ ಪಾವತಿಸಿದ್ದೀರಿ ಎಂದು ಹೇಳಿದಾಗ ತನ್ನ ತಪ್ಪಿನ ಅರಿವಾಗಿದೆ. ಆದರೆ ವಾಸ್ತವವಾಗಿ ಆ ಒಂದು ಗ್ಲಾಸಿನ ಬಿಯರ್ ಬೆಲೆ ಕೇವಲ 22.50 ಪೌಂಡ್ ಇತ್ತು.

ಹೋಟೆಲಿನವರು ಕಡಿತಗೊಂಡ ಹಣವನ್ನು ವಾಪಸ್ ನೀಡುವುದಾಗಿ ಒಪ್ಪಿಕೊಂಡಿದ್ದಾರೆ. ಒಂದು ಕ್ಷಣ ಯಾಮಾರಿದ್ದಕ್ಕೆ ಸಂದರ್ಭವು ಪಾಠ ಕಲಿಸಿದ್ದನ್ನು ಈತ ಮರೆಯಲಿಲ್ಲ. ಒಂದು ಗ್ಲಾಸ್ ಬಿಯರ್ ಗಾಗಿ ವಿಶ್ವದಲ್ಲೇ ಅತೀ ಹೆಚ್ಚು ಹಣ ನೀಡಿದ ಘಟನೆಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾನೆ.