ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ, ಮಗನ ಜೊತೆ ಸಿದ್ದರಾಮಯ್ಯ ಶಾಮೀಲು – ಶ್ರೀರಾಮುಲು

ರಾಯಚೂರು: ಜೈಲಿಗೆ ಹೋಗಿ ಬಂದವರು ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆ ಮಾಡುತ್ತಿದ್ದರು ಇವಾಗ ಅವರ ಪಕ್ಷದವರೇ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಆರೋಗ್ಯ ಮಂತ್ರಿ ಶ್ರೀರಾಮುಲು ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ಶುಕ್ರವಾರ ನಗರದಲ್ಲಿಂದು ಕನ್ನಡ ರಾಜ್ಯೋತ್ಸವದ ಧ್ವಜರೋಹಣ ನೆರೆವೇರಿಸಿ ಸುದ್ದಿಗಾರರೊಟ್ಟಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ ಬಹಿರಂಗ ಚರ್ಚೆಗೆ ಬರಲಿ ನಾನು ಮಾತನಾಡುತ್ತೇನೆ. ಸಿದ್ದರಾಮಯ್ಯ ಬೇಜಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಜನರಿಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ ಎಂದು ಅವರು ಸಿದ್ದರಾಮಯ್ಯ ವಿರುದ್ಧ ಆಕ್ರೋಶಗೊಂಡರು.

ಇನ್ನು ಸರ್ಕಾರ ಸತ್ತು ಹೋಗಿದೆ ಅನ್ನೊ ನಿಟ್ಟಿನಲ್ಲಿ ಮಾತನಾಡುತ್ತಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದು ಸರಿಯಾದುದ್ದಲ್ಲ, ಚುನಾವಣೆಯಲ್ಲಿ ಸೋತ ಬಳಿಕ ಅವರು ಆತಾಶೆಯಲ್ಲಿ ಈ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಅವರ ಆಡಳಿತದಲ್ಲಿ ವಿಪರೀತ ಭ್ರಷ್ಟಾಚಾರ, ಹಿಂಸಚಾರ ಆಗಿದೆ. ಮಗನೂ ಕೂಡ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಚಾರ ಮಾಡಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ಸಿದ್ದರಾಮಯ್ಯ ಅವರು ಕೂಡ ಇದರಲ್ಲಿ ಶಾಮೀಲು ಆಗಿದ್ದಾರೆ ಅನ್ನು ಸುದ್ದಿ ಕೂಡ ಹರಿದಾಡುತ್ತಿತ್ತು ಎಂದು ಅವರು ಗುಡುಗಿದರು.

ಅಲ್ಲದೆ, ಅಲ್ಪಸಂಖ್ಯಾತರನ್ನು ತಮ್ಮ ವೋಟ್​ ಬ್ಯಾಂಕ್​ಗಾಗಿ ಕಾಂಗ್ರೆಸ್​ ಬಳಸಿಕೊಳ್ಳುತ್ತಿದೆ. ಐಎಂಎ ಪ್ರಕರಣವನ್ನು ಈಗಾಗಲೇ ಸಿಬಿಐಗೆ ವಹಿಸಲಾಗಿದೆ ಇದರಲ್ಲಿ ಸಾಕಷ್ಟು ಜನ ಶಾಮೀಲಾಗಿದ್ದಾರೆ. ಫೋನ್ ಕದ್ದಾಲಿಕೆ ಅವರ ಸರ್ಕಾರದಲ್ಲಿ ನಡೆದಿದೆ. ನಿರ್ಮಲಾನಂದ ಸ್ವಾಮಿಗಳ ಪೋನ್ ಕೂಡ ಕದ್ದಾಲಿಕೆ ಮಾಡಿದ್ದಾರೆ ಎಂದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್​ ಮುಕ್ತ ಭಾರತ ಮಾಡಲು ಹೊರಟ್ಟಿದ್ದಾರೆ. ಅದರಂತೆ ರಾಜ್ಯದಲ್ಲಿ ಕೂಡ ಕಾಂಗ್ರೆಸ್​ಮುಕ್ತವಾಗಲಿದೆ. ನೂರು ದಿನಗಳ ಕಾಲ ಆಡಳಿತದಲ್ಲಿ ಭ್ರಷ್ಟಾಚಾರವುಲ್ಲದೇ ಪಾರದರ್ಶಕ ಆಡಳಿತ ನೀಡಿದ್ದೇವೆ ಎಂದು ಅವರು ತಮ್ಮ ಸರ್ಕಾರದ ಆಡಳಿತವನ್ನು ಸಮರ್ಥನೆ ಮಾಡಿಕೊಂಡರು.